ಯುಎಸ್ ಓಪನ್ನಲ್ಲಿ ಅಮ್ಮಂದಿರ ಗೆಲುವಿನ ಓಟ
ನ್ಯೂಯಾರ್ಕ್: ಸ್ಟಾರ್ ಯುವ ಆಟಗಾರ್ತಿಯರು ಕರೊನಾ ಭೀತಿಯಿಂದ ಹಿಂದೆ ಸರಿದಿರುವ ನಡುವೆ ಯುಎಸ್ ಓಪನ್ ಗ್ರಾಂಡ್ ಸ್ಲಾಂ ಟೆನಿಸ್ ಟೂರ್ನಿಯಲ್ಲಿ ಅಮ್ಮಂದಿರಾಗಿರುವ ಆಟಗಾರ್ತಿಯರು ಮುನ್ನಡೆ ಸಾಧಿಸಿದ್ದಾರೆ. 4ನೇ ದಿನದ ಪಂದ್ಯಗಳಲ್ಲಿ ಅಮ್ಮಂದಿರಾದ ಆತಿಥೇಯ ತಾರೆ ಸೆರೇನಾ ವಿಲಿಯಮ್ಸ್ ಮತ್ತು ಬೆಲಾರಸ್ನ ವಿಕ್ಟೋರಿಯಾ ಅಜರೆಂಕಾ ಮೂರನೇ ಸುತ್ತಿಗೇರುವಲ್ಲಿ ಸಲರಾಗಿದ್ದಾರೆ. ದಿನದ ಮೊದಲ ಪಂದ್ಯದಲ್ಲಿ, 3 ವರ್ಷಗಳ ತಾಯ್ತನದ ಬಿಡುವಿನ ಬಳಿಕ ಮರಳಿರುವ ಬಲ್ಗೇರಿಯಾದ ಸ್ವೆಟನಾ ಪಿರೊಂಕೋವಾ ಸ್ಪೇನ್ ತಾರೆ ಗಾರ್ಬಿನ್ ಮುಗುರುಜಾಗೆ ಆಘಾತ ನೀಡಿ ಗಮನ ಸೆಳೆದಿದ್ದರು. ಆತಿಥೇಯ ಯುವ ಆಟಗಾರ್ತಿಯರಾದ ಸೋಫಿಯಾ ಕೆನಿನ್, ಅಮಂಡ ಅನಿಸಿಮೋವಾ, ಸ್ಲೋವನ್ ಸ್ಟೀಫನ್ಸ್ , ಮ್ಯಾಡಿಸನ್ ಕೀಯ್ಸ ಕೂಡ 2ನೇ ಸುತ್ತಿನ ತಡೆ ದಾಟಿದ್ದಾರೆ.
ದಾಖಲೆಯ 24ನೇ ಗ್ರಾಂಡ್ ಸ್ಲಾಂ ಪ್ರಶಸ್ತಿ ಗೆಲುವಿನ ಹಂಬಲದಲ್ಲಿರುವ ಸೆರೇನಾ ವಿಲಿಯಮ್ಸ್ ಗುರುವಾರ ನಡೆದ 2ನೇ ಸುತ್ತಿನ ಕಾದಾಟದಲ್ಲಿ ರಷ್ಯಾದ ಮಾರ್ಗರಿಟಾ ಗಸ್ಪರ್ಯಾನ್ ವಿರುದ್ಧ 6-2, 6-4 ನೇರಸೆಟ್ಗಳಿಂದ ಜಯಿಸಿದರು. ಮತ್ತೋರ್ವ ಮಾಜಿ ನಂ. 1 ಆಟಗಾರ್ತಿ ಅಜರೆಂಕಾ ದೇಶಬಾಂಧವೆ ಹಾಗೂ 5ನೇ ಶ್ರೇಯಾಂಕಿತೆ ಅರಿನಾ ಸಬಲೆಂಕಾ ವಿರುದ್ಧ 6-1, 6-3 ನೇರಸೆಟ್ಗಳಿಂದ ಗೆಲುವು ಒಲಿಸಿಕೊಂಡರು.
ಕಳೆದ ವಾರವಷ್ಟೇ ಡಬ್ಲ್ಯುಟಿಎ ಟೂರ್ನಿಯಲ್ಲಿ ಪ್ರಶಸ್ತಿ ಒಲಿಸಿಕೊಂಡಿದ್ದ ಅಜರೆಂಕಾ, ತಾಯ್ತನ ಮತ್ತು ಟೆನಿಸ್ ನಡುವೆ ಸಮತೋಲನ ಕಾಪಾಡಿಕೊಂಡು ಯಶಸ್ಸು ಕಾಣುತ್ತಿರುವ ಬಗ್ಗೆ ಸಂಭ್ರಮ ಹಂಚಿಕೊಂಡಿದ್ದಾರೆ. ‘ತಾಯಿಯಾಗಿದ್ದರೇನಂತೆ ನಾವು ಕೂಡ ಟೆನಿಸ್ ಆಟಗಾರ್ತಿಯರು. ಇತರ ಮಹಿಳೆಯರಂತೆ ನಾವು ಕೂಡ ಕನಸು, ಗುರಿ ಮತ್ತು ಪ್ಯಾಷನ್ ಹೊಂದಿದ್ದೇವೆ. ತಾಯಿಯಾದ ತಕ್ಷಣ ಜೀವನ ನಿಲ್ಲುವುದಿಲ್ಲ’ ಎಂದು 4 ವರ್ಷದ ಪುತ್ರನನ್ನು ಹೊಂದಿರುವ ಅಜರೆಂಕಾ ಹೇಳಿದ್ದಾರೆ.
ಯುಎಸ್ ಓಪನ್ನಲ್ಲಿ ಈ ಬಾರಿ ಒಟ್ಟು 9 ಅಮ್ಮಂದಿರು ಕಣಕ್ಕಿಳಿದಿದ್ದಾರೆ. ಈ ಪೈಕಿ ಮೂವರು 3ನೇ ಸುತ್ತಿಗೇರಿದ್ದರೆ, ಉಳಿದ 6 ತಾಯಂದಿರಾದ ಕಿಮ್ ಕ್ಲೈಸ್ಟರ್ಸ್, ವೆರಾ ವೊನರೆವಾ, ತಜನಾ ಮರಿಯಾ, ಕ್ಯಾಟರಿನ್ ಬೊಂಡಾರೆಂಕೊ, ಪ್ಯಾಟ್ರಿಸಿಯಾ ಮರಿಯಾ ಟಿಗ್ ಮತ್ತು ಒಲ್ಗಾ ಗೊವೊರ್ಸೊವಾ ಈಗಾಗಲೆ ಹೊರಬಿದ್ದಿದ್ದಾರೆ.