1.38 ಕೋಟಿ ಜನ ಮೊಬೈಲ್ ಫೋನ್ ಬಳಕೆಯನ್ನೇ ಬಿಟ್ಟಿದ್ದಾರೆ…! ಕಾರಣವೇನು ಗೊತ್ತಾ?
ನವದೆಹಲಿ: ಭಾರತದಲ್ಲಿ ಮೊಬೈಲ್ ಫೋನ್ ಬಳಕಕೆದಾರರ ಸಂಖ್ಯೆಯಲ್ಲಿ ಭಾರಿ ಇಳಿಕೆ ಕಂಡುಬಂದಿದೆ. ಎರಡು ತಿಂಗಳ ಅವಧಿಯಲ್ಲಿ ಅಂದಾಜು 1.48 ಕೋಟಿ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿದೆ. ಸಂಶೋಧನೆ ಹಾಗೂ ಸಮೀಕ್ಷಾ ಸಂಸ್ಥೆಯೊಂದು ಈ ವರದಿ ನೀಡಿದೆ.
ಇಂಡಿಯಾ ರೇಟಿಂಗ್ ಆ್ಯಂಡ್ ರಿಸರ್ಚ್ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ ಈ ಮಾಹಿತಿ ಕಲೆ ಹಾಕಲಾಗಿದೆ. ಭಾರತದಲ್ಲಿ ಮೊಬೈಲ್ ಹಾಗೂ ಲ್ಯಾಂಡ್ಲೈನ್ ಬಳಕೆದಾರರ ಸಂಖ್ಯೆಯಲ್ಲಿ ಭಾರಿ ಕುಸಿತ ಮುಂದುವರಿದಿದೆ. ಅದರಲ್ಲೂ ಕೋವಿಡ್ ಮಹಾಮಾರಿ ಟೆಲಿಕಾಂ ಕ್ಷೇತ್ರದ ಮೇಲೆ ಭಾರಿ ಪರಿಣಾಮವನ್ನೇ ಉಂಟು ಮಾಡಿದೆ ಎಂದು ವರದಿ ಹೇಳಿದೆ.
ಎಪ್ರಿಲ್ನಲ್ಲಿ 82 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂದು ಲೆಕ್ಕ ಹಾಕಲಾಗಿತ್ತು. ಇದೇ ರೀತಿ, ಮೇ ತಿಂಗಳಲ್ಲೂ ಇಳಿಕೆ ಮುಂದುವರಿದು ಮತ್ತೆ 56 ಲಕ್ಷ ಬಳಕೆದಾರರು ಕಡಿಮೆಯಾಗಿದ್ದಾರೆ ಎಂಬುದು ಗೊತ್ತಾಗಿದೆ.
ಮೊಬೈಲ್ ಬಳಕೆ ಮಾತ್ರವಲ್ಲದೇ, ಇಂಟರ್ನೆಟ್, ವೈರ್ಲೆಸ್ ಇಂಟರ್ನೆಟ್ ಬಳಕೆದಾರರ ಸಂಖ್ಯೆ ಕೂಡ ಕುಸಿದಿದೆ. ಲಾಕ್ಡೌನ್ ಸಮಯಕ್ಕೆ ಹೋಲಿಸಿದಲ್ಲಿ ಇನ್ನೂ ಕೆಳಕ್ಕಿಳಿದಿದೆ ಎಂದು ವರದಿಯಲ್ಲಿ ಹೇಳಲಾಗಿದೆ.
ಕರೊನಾ ಸಂಕಷ್ಟದ ಕಾರಣದಿಂದಾಗಿ ನಗರಪ್ರದೇಶಗಳಲ್ಲಿ ಉದ್ಯೋಗ ಕಂಡುಕೊಂಡಿದ್ದ ಜನರೆಲ್ಲ ತಮ್ಮೂರುಗಳಿಗೆ ಮರಳಿದ್ದರಿಂದ ಮೊಬೈಲ್ ಬಳಕೆಯಿಂದ ದೂರವೇ ಉಳಿದಿದ್ದಾರೆ. ಉದ್ಯೋಗ ಕಡಿತ, ಆದಾಯ ಕುಸಿತ ಮೊದಲಾದ ಕಾರಣಗಳಿಂದ ಹೆಚ್ಚುವರಿ ಮೊತ್ತ ಭರಿಸಲಾಗದೆ ಟೆಲಿಕಾಮ್ ಬಳಕೆದಾರರು ಕಡಿಮೆಯಾಗಿದ್ದಾರೆಂದು ವಿಶ್ಲೇಷಿಸಲಾಗಿದೆ.
ಬಳಕೆದಾರರ ಸಂಖ್ಯೆಯಲ್ಲಿ ಇಳಿಕೆಯಾಗಿರುವುದನ್ನು ದೂರ ಸಂಪರ್ಕ ನಿಯಂತ್ರಣ ಮಂಡಳಿ (ಟ್ರಾಯ್) ಕೂಡ ಪುಷ್ಠೀಕರಿಸಿದೆ.