ಬೆಂಗಳೂರು,ಮೇ.12-ಪೊಲೀಸರ ಕೈಗೆ ಸಿಗದೆ ತಲೆಮರೆಸಿಕೊಂಡಿದ್ದ ಕುಖ್ಯಾತ ರೌಡಿ ಕಾಲಿಗೆ ಗುಂಡು ಹಾರಿಸಿ ಸೆರೆ ಹಿಡಿಯುವಲ್ಲಿ ಸಂಘಟಿತ ಅಪರಾಧ ದಳದ ಪೂರ್ವ ವಲಯ ಸಿಸಿಬಿ ಪೊಲೀಸರು ಯಶಸ್ವಿಯಾಗಿದ್ದಾರೆ. ಗುಂಡೇಟಿನಿಂದ ಗಾಯಗೊಂಡು ಸಿಕ್ಕಿಬಿದ್ದಿರುವ ರೌಡಿಯನ್ನು ಎರಡು ಕೊಲೆ ಹಾಗೂ ಕೊಲೆಯತ್ನ ಪ್ರಕರಣದಲ್ಲಿ ಭಾಗಿಯಾಗಿರುವ ರಾಮಮೂರ್ತಿನಗರದ ರೌಡಿಶೀಟರ್ ಸೂರ್ಯ ಅಲಿಯಾಸ್ ಚಟ್ಟಿ ಎಂದು ಗುರುತಿಸಲಾಗಿದೆ.

ಸೂರ್ಯ ಮತ್ತವನ ಗ್ಯಾಂಗ್ ಕಳೆದ ಮೇ.4 ರಂದು ರಘುರಾಮ್ ಎಂಬುವರ ಮೇಲೆ ಹಲ್ಲೆ ಮಾಡಿ ಪರಾರಿಯಾಗಿತ್ತು.ಸೂರ್ಯ ಅಂಡ್ ಗ್ಯಾಂಗ್ ಬಂಧನಕ್ಕೆ ಎಸಿಪಿ ಪರಮೇಶ್ವರ್ ನೇತೃತ್ವದ ಸಿಸಿಬಿ ಪೊಲೀಸರ ತಂಡ ಶೋಧ ನಡೆಸುತಿತ್ತು.

ಕೆಲ ದಿನಗಳ ಹಿಂದೆ ಸೂರ್ಯ ಮತ್ತವನ ಗ್ಯಾಂಗ್ ಬಾಣಸವಾಡಿ ಪೊಲೀಸ್ ಠಾಣಾ ವ್ಯಾಪ್ತಿಯ ಹೆಚ್‍ಬಿಆರ್ ಬಡಾವಣೆಯಲ್ಲಿರುವ ಪ್ರವೀಣ್ ಎಂಬುವರ ಮನೆಯಲ್ಲಿ ಅಡಗಿಕೊಂಡಿರುವ ಮಾಹತಿ ದೊರೆಯಿತು.
ಮನೆ ಮೇಲೆ ದಾಳಿ ಮಾಡಿದಾಗ ಸೂರ್ಯನ ಸಹಚರರಾದ ಗಿರೀಶ್, ಕಿರಣ್, ಅಜಿತ್, ಪ್ರವೀಣ್ ಹಾಗೂ ರಾಹುಲ್ ಎಂಬುವರು ಪೊಲೀಸರಿಗೆ ಸಿಕ್ಕಿಬಿದ್ದಿದ್ದರು. ಆದರೆ, ಸೂರ್ಯ ಕಂಪೌಂಡ್ ಹಾರಿ ತಪ್ಪಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದ.

ನಿನ್ನೆ ರಾತ್ರಿ 12.40ರ ಸಮಯದಲ್ಲಿ ಪರಮೇಶ್ವರ್ ಅಂಡ್ ಟೀಮ್ ಹೆಚ್‍ಬಿಆರ್ ಬಡಾವಣೆಯಲ್ಲಿ ಗಸ್ತು ತಿರುಗುತ್ತಿದ್ದಾಗ ಬಡಾವಣೆಯ 2ನೇ ಕ್ರಾಸ್‍ನ ಜೋಪಡಿಯೊಂದರ ಬಳಿ ಸೂರ್ಯ ಇರುವ ಬಗ್ಗೆ ಮಾಹಿತಿ ದೊರೆಯಿತು. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ಆತನ ಬಂಧನಕ್ಕೆ ಮುಂದಾದಾಗ ಆತ ಕತ್ತಲೆಯಲ್ಲಿ ತಪ್ಪಿಸಿಕೊಂಡು ಸಮೀಪದ ತೋಪೊಂದಕ್ಕೆ ಪರಾರಿಯಾದ.

ಆತನ ಬೆನ್ನತ್ತಿದ್ದ ಕಾನ್ಸ್‍ಟೆಬಲ್ ಹನುಮೇಶ್ ಅವರು ಸೂರ್ಯನನ್ನು ಬಂಧಿಸಲು ಹೋದಾಗ ಆತ ತನ್ನ ಬಳಿ ಇದ್ದ ಚಾಕುವಿನಿಂದ ದಾಳಿ ಮಾಡಿದ.ಈ ಸಂದರ್ಭದಲ್ಲಿ ಎಸಿಪಿ ಪರಮೇಶ್ವರ್ ಅವರು ಶರಣಾಗುವಂತೆ ಸೂಚಿಸಿ ಗಾಳಿಯಲ್ಲಿ ಒಂದು ಸುತ್ತು ಗುಂಡು ಹಾರಿಸಿದರೂ ಆತ ಚಾಕುವಿನಿಂದ ಅವರ ಮೇಲೆ ಹಲ್ಲೆ ನಡೆಸಲು ಯತ್ನಿಸಿದಾಗ ಆತ್ಮ ರಕ್ಷಣೆಗಾಗಿ ಪರಮೇಶ್ವರ್ ಅವರು ಹಾರಿಸಿದ ಗುಂಡು ಸೂರ್ಯನ ಕಾಲಿಗೆ ತಗುಲಿ ಕುಸಿದುಬಿದ್ದ.

ತಕ್ಷಣ ಪೊಲೀಸರು ಸೂರ್ಯನನ್ನು ವಶಕ್ಕೆ ಪಡೆದು ಆತನನ್ನು ಬೌರಿಂಗ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಸೂರ್ಯನ ಹಲ್ಲೆಯಿಂದ ಗಾಯಗೊಂಡಿರುವ ಹನುಮೇಶ್ ಅವರಿಗೆ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗಿದೆ.

ಸೂರ್ಯ ಪೊಲೀಸರ ಮೇಲೆ ಹಲ್ಲೆ ನಡೆಸಲು ಮುಂದಾದಾಗ ಗುಂಡು ಹಾರಿಸಿ ಆತನನ್ನು ಸೆರೆ ಹಿಡಿದಿರುವ ಬಗ್ಗೆ ಎಸಿಪಿ ಪರಮೇಶ್ವರ್ ಅವರು ಬಾಣಸವಾಡಿ ಪೊಲೀಸರಿಗೆ ಮಾಹಿತಿ ನೀಡಿ ಮುಂದಿನ ಕ್ರಮ ಜರುಗಿಸಿದ್ದಾರೆ.

Source: Esanje

You Might Also Like

" data-numposts="10" data-width="">