ಬೆಂಗಳೂರು, ಮೇ 7: ರಾಜ್ಯದಲ್ಲಿ ದಿನದಿಂದ ದಿನಕ್ಕೆ ಕೋವಿಡ್ ಸೋಂಕಿತರು ಮತ್ತು ಸಾವಿನ ಪ್ರಕರಣಗಳು ಮಿತಿ ಮೀರುತ್ತಿದ್ದು, ಪರಿಸ್ಥಿತಿ ಕೈ ಮೀರುತ್ತಿರುವ ಹಿನ್ನೆಲೆಯಲ್ಲಿ ಮೇ 10ರ ಸೋಮವಾರ ಬೆಳಗ್ಗೆ 6 ಗಂಟೆಯಿಂದ ಮೇ 24ರ ಬೆಳಗ್ಗೆ 6 ಗಂಟೆಯವರೆಗೆ ಹದಿನಾಲ್ಕು ದಿನಗಳ ರಾಜ್ಯಾದ್ಯಂತ ಸಂಪೂರ್ಣ ಲಾಕ್‍ಡೌನ್ ಜಾರಿ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಇಂದಿಲ್ಲಿ ಪ್ರಕಟಿಸಿದ್ದಾರೆ.

ಶುಕ್ರವಾರ ಸಂಜೆ ತುರ್ತು ಸುದ್ದಿಗೋಷ್ಠಿ ನಡೆಸಿದ ಯಡಿಯೂರಪ್ಪ, ಲಾಕ್‍ಡೌನ್ ಅವಧಿಯಲ್ಲಿ ಹಾಲು, ಔಷಧಾಲಯಗಳು, ಆಸ್ಪತ್ರೆಗೆ ಅನುಮತಿ ನೀಡಲಾಗಿದೆ. ಉಳಿದಂತೆ ಸಂಪೂರ್ಣ ಬಂದ್ ಆಗಿರಲಿದೆ. ರಸ್ತೆ ಕಾಮಗಾರಿ ಮತ್ತು ಕಟ್ಟಡ ಕಾಮಗಾರಿಗಳಿಗೆ ಯಾವುದೇ ರೀತಿಯ ನಿರ್ಬಂಧ ವಿಧಿಸಿಲ್ಲ. ಆದರೆ, ಕಾರ್ಯನಿರ್ವಹಿಸುವ ಸಿಬ್ಬಂದಿ ಮಾರ್ಗಸೂಚಿಯನ್ನು ಪಾಲಿಸುವುದು ಕಡ್ಡಾಯ ಎಂದು ಹೇಳಿದರು.

ತಳ್ಳುಗಾಡಿ ತರಕಾರಿ ವ್ಯಾಪಾರಕ್ಕೆ ಅವಕಾಶ: ಆಹಾರ ಸಾಮಗ್ರಿ, ದಿನಸಿ ವಸ್ತುಗಳು, ಹಣ್ಣು ಮತ್ತು ತರಕಾರಿ, ಮಾಂಸ ಮತ್ತು ಮೀನು ಮಾರಾಟ ಮಳಿಗೆಗಳು ಮತ್ತು ಪಶು ಆಹಾರದ ಮಳಿಗೆಗಳು ಬೆಳಗ್ಗೆ 6 ರಿಂದ 10 ಗಂಟೆಯ ವರೆಗೆ ತೆರೆಯಲು ಅನುಮತಿಸಿದೆ. ಹಾಲಿನ ಬೂತ್‍ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ನೀಡಲಾಗಿದೆ.

ವಿಮಾನ ಮತ್ತು ರೈಲ್ವೆ ಸಂಚಾರ ಇರಲಿದ್ದು, ಹೊರಗಿನಿಂದ ಬರುವ ಮತ್ತು ಹೊರ ಹೋಗುವ ಪ್ರಯಾಣಿಕರು ತಮ್ಮ ಸ್ವಂತ ವಾಹನಗಳು ಅಥವಾ ಟ್ಯಾಕ್ಸಿ, ಕ್ಯಾಬ್, ಆಟೋರಿಕ್ಷಾ ಸೇವೆ ಬಳಸಿಕೊಳ್ಳಬಹುದು. ಆದರೆ, ಪ್ರಯಾಣದ ಟಿಕೆಟ್ ಹೊಂದಿರುವುದು ಕಡ್ಡಾಯ. ಸರಕಾರಿ ಕಚೇರಿಗಳು ಭಾಗಶಃ ಕಾರ್ಯನಿರ್ವಹಿಸಲಿವೆ.

ಸಾರ್ವಜನಿಕರ ಓಡಾಟವನ್ನು ಕಡ್ಡಾಯವಾಗಿ ಸಂಪೂರ್ಣ ನಿಷೇಧಿಸಲಾಗಿದ್ದು, ಕೆಲವು ವಿನಾಯಿತಿಗಳನ್ನು ಮಾತ್ರ ನೀಡಲಾಗಿದೆ. ಕೋವಿಡ್ ಮಾರ್ಗಸೂಚಿಯಲ್ಲಿ ಅನುಮತಿಸಿದ ಸೇವೆಗಳನ್ನು ಹೊರತು ಪಡಿಸಿ, ಸರಕಾರಿ ಹಾಗೂ ಖಾಸಗಿ ಬಸ್‍ಗಳು ಹಾಗೂ ಇತರ ಪ್ರಯಾಣಿಕರ ವಾಹನಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. ರಾಜ್ಯ ಮತ್ತು ಕೇಂದ್ರ ಸರಕಾರದ ಅಗತ್ಯ ಸೇವೆ ನೀಡುವ ಕಚೇರಿಗಳು ಮಾತ್ರ ಕಾರ್ಯ ನಿರ್ವಹಿಸಲಿವೆ.

ನಿಷೇಧ: ಸೋಂಕು ನಿಯಂತ್ರಿಸುವ ದೃಷ್ಟಿಯಿಂದ ಮೇ 10ರ ನಂತರ ಮದುವೆ ಸೇರಿದಂತೆ ಯಾವುದೇ ಸಭೆ, ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಗಾಗಲೇ ನಿಗದಿ ಆಗಿರುವ ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಗಡಿ ಭಾಗಗಳನ್ನು ಸಂಪೂರ್ಣ ಬಂದ್ ಮಾಡಲಾಗುವುದು. ಅಂತರ್ ರಾಜ್ಯ ಮತ್ತು ಅಂತರ್ ಜಿಲ್ಲಾ ಸಂಚಾರಕ್ಕೆ ಅಗತ್ಯ ಸೇವೆಗಳನ್ನು ಹೊರತುಪಡಿಸಿ ನಿರ್ಬಂಧ ಹೇರಿರಲಾಗಿದೆ.

ಬಸ್, ಮೆಟ್ರೋ ರೈಲು ಸಂಚಾರ ಇರುವುದಿಲ್ಲ. ಟ್ಯಾಕ್ಸಿ ಮತ್ತು ಆಟೋರಿಕ್ಷಾಗಳು ತುರ್ತು ಸಂದರ್ಭಗಳಲ್ಲಿ ಹಾಗೂ ಮಾರ್ಗಸೂಚಿಯಲ್ಲಿ ಅನುಮತಿಸಿದ ರೀತಿಯಲ್ಲಿ ಸಂಚರಿಸಲು ಅವಕಾಶವಿದೆ. ಶಾಲೆ, ಕಾಲೇಜುಗಳು, ಶಿಕ್ಷಣ/ಕೋಚಿಂಗ್ ಸಂಸ್ಥೆಗಳ ತರಗತಿಗಳು ನಡೆಯುವುದಿಲ್ಲ. ಸಿನೆಮಾ ಹಾಲ್‍ಗಳು, ಶಾಪಿಂಗ್ ಮಾಲ್‍ಗಳು, ಕ್ರೀಡಾ ಸಂಕೀರ್ಣಗಳು, ಕ್ರೀಡಾಂಗಣ, ಈಜುಕೊಳ, ಉದ್ಯಾನವನಗಳು, ಮನರಂಜನಾ ಪಾರ್ಕ್‍ಗಳು, ಕ್ಲಬ್‍ಗಳು, ಥಿಯೇಟರ್ ಗಳು, ಬಾರ್ ಗಳು ಮತ್ತು ಸಭಾಂಗಣ, ಸಮುದಾಯ ಭವನಗಳಂತಹ ಸ್ಥಳಗಳು ಮುಚ್ಚಲಿವೆ. ಸಾಮಾಜಿಕ, ರಾಜಕೀಯ, ಕ್ರೀಡೆ, ಮನರಂಜನೆ, ಶೈಕ್ಷಣಿಕ, ಸಾಂಸ್ಕೃತಿಕ, ಧಾರ್ಮಿಕ ಸಮಾರಂಭ ಸೇರಿದಂತೆ ಹೆಚ್ಚು ಜನ ಸೇರುವ ಕಾರ್ಯಕ್ರಮಗಳು, ಸಮಾವೇಶಗಳನ್ನು ನಿಷೇಧಿಸಲಾಗಿದೆ. ಎಲ್ಲ ಧಾರ್ಮಿಕ ಸ್ಥಳಗಳು/ಪೂಜಾ ಸ್ಥಳಗಳಿಗೆ ಸಾರ್ವಜನಿಕರ ಪ್ರವೇಶ ನಿಷೇಧಿಸಲಾಗಿದೆ.

ಸರಕು ಸೇವೆಗೆ ಅವಕಾಶ: ಹೊಟೇಲ್‍ಗಳು, ರೆಸ್ಟೋರೆಂಟ್‍ಗಳು ಮತ್ತು ಆಹಾರ ಮಳಿಗೆಗಳು ಪಾರ್ಸೆಲ್ ಹಾಗೂ ಹೋಂ ಡೆಲಿವರಿ ಸೇವೆಗಳಿಗೆ ಮಾತ್ರ ಅನುಮತಿಸಲಾಗುವುದು. ಎಲ್ಲ ಆರೋಗ್ಯ ಸೇವಾ ಸೌಲಭ್ಯಗಳು ಮತ್ತು ಸಂಬಂಧಿತ ಸೇವೆಗಳಿಗೆ ಅವಕಾಶ ನೀಡಲಾಗುವುದು. ಎಲ್ಲ ಕೃಷಿ ಮತ್ತು ಪೂರಕ ಚಟುವಟಿಕೆಗಳು, ಮೀನುಗಾರಿಕೆ, ಕೋಳಿ ಸಾಕಾಣಿಕೆ, ಮಾಂಸ ಮತ್ತು ಹೈನುಗಾರಿಕೆಗೆ ಸಂಬಂಧಿಸಿದ ಚಟುವಟಿಕೆಗಳಿಗೆ ಅನುಮತಿ ನೀಡಲಾಗುವುದು. ಎಲ್ಲ ಸರಕು ಸಾಗಾಣಿಕೆ ವಾಹನಗಳ ಮುಕ್ತ ಸಂಚಾರಕ್ಕೆ ಅನುಮತಿ ನೀಡಲಾಗುವುದು.

ಮದ್ಯ ಪಾರ್ಸಲ್ ಸೇವೆ: ನ್ಯಾಯಬೆಲೆ ಅಂಗಡಿಗಳು ತೆರೆಯಲಿವೆ. ಮದ್ಯ ಮಾರಾಟ ಮಳಿಗೆಗಳು ಕೇವಲ ಪಾರ್ಸೆಲ್ ಸೇವೆಗಾಗಿ ಬೆಳಗ್ಗೆ 6 ರಿಂದ 10ರ ವರೆಗೆ ತೆರೆಯಲಿವೆ. ಜನರು ಮನೆಯಿಂದ ಹೊರ ಬರುವುದನ್ನು ತಡೆಯುವ ನಿಟ್ಟಿನಲ್ಲಿ ದಿನದ 24 ಗಂಟೆಯೂ ಅಗತ್ಯ ವಸ್ತುಗಳ ಹೋಂ ಡೆಲಿವರಿ ಸೇವೆ ಒದಗಿಸುವುದನ್ನು ಉತ್ತೇಜಿಸಲಾಗುವುದು. ದೂರ ಸಂಪರ್ಕ, ಇಂಟರ್ ನೆಟ್ ಸೇವೆ, ಪ್ರಸಾರ ಮತ್ತು ಕೇಬಲ್ ಸೇವೆಗಳು ಲಭ್ಯವಾಗಲಿವೆ.

ಐಟಿ ಮತ್ತು ಐಟಿಇಎಸ್ ಕಂಪೆನಿಗಳ ಅಗತ್ಯ ಸಿಬ್ಬಂದಿ ಮಾತ್ರ ಕಚೇರಿಗಳಲ್ಲಿ ಕಾರ್ಯ ನಿರ್ವಹಿಸಲು ಅವಕಾಶವಿದ್ದು, ಇತರ ಸಿಬ್ಬಂದಿ ಮನೆಯಿಂದಲೇ ಕಾರ್ಯನಿರ್ವಹಿಸಬೇಕು. ಸ್ಥಳದಲ್ಲಿಯೇ ಕಾರ್ಮಿಕರು/ ಸಿಬ್ಬಂದಿ ಲಭ್ಯವಿರುವ ಕೈಗಾರಿಕೆಗಳು/ ಉತ್ಪಾದನಾ ಘಟಕಗಳು ಕಾರ್ಯ ನಿರ್ವಹಿಸಬಹುದು.

ಅಗತ್ಯ ವಸ್ತುಗಳ ತಯಾರಿಕಾ ಘಟಕಗಳ ಕಾರ್ಯನಿರ್ವಹಣೆಗೆ ಅವಕಾಶ ನೀಡಲಾಗುವುದು. ನಿರಂತರ ಕಾರ್ಯನಿರ್ವಹಣೆಯ ಅಗತ್ಯವಿರುವ ತಯಾರಿಕಾ ಘಟಕಗಳಿಗೆ ಅನುಮತಿ ನೀಡಲಾಗುವುದು. ಸ್ಥಳದಲ್ಲಿಯೇ ಕಾರ್ಮಿಕರು, ಕೆಲಸಗಾರರನ್ನು ಹೊಂದಿರುವ ನಿರ್ಮಾಣ ಚಟುವಟಿಕೆಗಳಿಗೆ ಹಾಗೂ ರಸ್ತೆ ಕಾಮಗಾರಿಗಳಿಗೆ ಅನುಮತಿ ನೀಡಲಾಗುವುದು. ಅಂತ್ಯಸಂಸ್ಕಾರದಲ್ಲಿ ಗರಿಷ್ಠ 5 ಜನರಿಗೆ ಪಾಲ್ಗೊಳ್ಳಲು ಅವಕಾಶ ನೀಡಲಾಗಿದೆ.

ಏನಿರಲಿದೆ ?

ವಿಮಾನ, ರೈಲು ಸಂಚಾರ, ಅಂತರ ರಾಜ್ಯ ಸರಕು ಸೇವೆ, ಆಸ್ಪತ್ರೆ, ಔಷಧಾಲಯ, ಹಾಲು ಸಹಿತ ತುರ್ತು ಅಗತ್ಯ ಸೇವೆ ಅಭಾದಿತ. ಕಟ್ಟಡ ನಿರ್ಮಾಣ ಮತ್ತು ರಸ್ತೆ ಕಾಮಗಾರಿಗಳಿಗೆ ಅವಕಾಶ. ಹೊಟೇಲ್/ಮದ್ಯ ಪಾರ್ಸಲ್ ಸೇವೆಗೆ ಅವಕಾಶ. ಅಗತ್ಯ ವಸ್ತುಗಳ ಖರೀದಿಗೆ ಬೆಳಗ್ಗೆ 6ರಿಂದ 10ರ ವರೆಗೆ ಮಾತ್ರ ಅವಕಾಶ. ಹಾಲಿನ ಬೂತ್‍ಗಳು ಹಾಗೂ ತಳ್ಳುಗಾಡಿಗಳಲ್ಲಿ ತರಕಾರಿ ಮಾರಾಟಕ್ಕೆ ಬೆಳಗ್ಗೆ 6 ರಿಂದ ಸಂಜೆ 6ರ ವರೆಗೆ ಅವಕಾಶ ನೀಡಲಾಗಿದೆ.

ಏನಿರುವುದಿಲ್ಲ ?

ಮೆಟ್ರೋ, ಕೆಎಸ್ಸಾಟಿಸಿ, ಬಿಎಂಟಿಸಿ ಸೇರಿ ರಾಜ್ಯ ರಸ್ತೆ ಸಾರಿಗೆ ಹಾಗೂ ಖಾಸಗಿ ಬಸ್‍ಗಳ ಸಂಚಾರವನ್ನು ಸಂಪೂರ್ಣ ನಿಷೇಧಿಸಿದೆ. ಟ್ಯಾಕ್ಸಿ, ಕ್ಯಾಬ್ ಸಹಿತ ಆಟೋರಿಕ್ಷಾಗಳಿಗೆ ಅನುಮತಿಯೊಂದಿಗೆ ತುರ್ತು ಸಂದರ್ಭಗಳಲ್ಲಿ ಸಂಚಾರಕ್ಕೆ ಅವಕಾಶ. ಮೇ 10ರ ನಂತರ ಮದುವೆ ಸೇರಿದಂತೆ ಸಭೆ- ಸಮಾರಂಭಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ಈಗಾಗಲೇ ನಿಗದಿ ಆಗಿರುವ ಮದುವೆಗಳಿಗೆ 50 ಜನರಿಗೆ ಮಾತ್ರ ಅವಕಾಶ ನೀಡಲಾಗುವುದು. ಗಡಿ ಭಾಗಗಳನ್ನು ಸಂಪೂರ್ಣ ಬಂದ್. ಚಿತ್ರಮಂದಿರ, ಮಾಲ್‍ಗಳು ಸೇರಿದಂತೆ ವ್ಯಾಪಾರ ವಹಿವಾಟು ಸಂಪೂರ್ಣ ನಿರ್ಬಂಧ.

Source: Vartha Bharathi

You Might Also Like

" data-numposts="10" data-width="">