ಬೆಂಗಳೂರು, ಎ.26: ಕೋವಿಡ್ ರೋಗಿಗಳಿಗೆ ಹಾಸಿಗೆ ಮೀಸಲಿಡದ ಆರೋಪ ಸಂಬಂಧ ಖಾಸಗಿ ಆಸ್ಪತ್ರೆಯೊಂದರ ಮುಖ್ಯ ಕಾರ್ಯನಿರ್ವಹಣಾಧಿಕಾರಿ (ಸಿಇಒ) ಸೇರಿ 6 ಜನರ ವಿರುದ್ಧ ಪುಟ್ಟೇನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬೊಮ್ಮನಹಳ್ಳಿ ವಲಯದ ಬಿಬಿಎಂಪಿ ವೈದ್ಯಾಧಿಕಾರಿ ನಾಗೇಂದ್ರ ಕುಮಾರ್ ನೀಡಿದ ದೂರಿನ ಮೇರೆಗೆ ಬನ್ನೇರುಘಟ್ಟ ರಸ್ತೆಯಲ್ಲಿರುವ ಖಾಸಗಿ ಆಸ್ಪತ್ರೆಯ ಸಿಇಒ ಡಾ.ಡೇವಿಡ್ ಸೋನಾ, ಶಸ್ತ್ರಾಚಿಕಿತ್ಸಾ ವಿಭಾಗದ ಕಲ್ಪನಾ, ಮೆಡಿಕಲ್ ಸೂಪರಿಂಟೆಂಡೆಂಟ್ ಡಾ.ಶಾಂತಾ ಸೇರಿದಂತೆ 6 ಮಂದಿ ವಿರುದ್ಧ ರಾಷ್ಟ್ರೀಯ ವಿಕೋಪ ನಿರ್ವಹಣಾ ಕಾಯ್ದೆ(ಎನ್‍ಡಿಎಂಎ) ಅಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.

ಕೋವಿಡ್ ಪ್ರಕರಣಗಳು ದ್ವಿಗುಣವಾಗಿರುವ ಕಾರಣ ಕೊರೋನ ರೋಗಿಗಳಿಗೆ ಪ್ರತಿಯೊಂದು ಖಾಸಗಿ ಆಸ್ಪತ್ರೆಯು ಶೇ.50 ರಷ್ಟು ಹಾಸಿಗೆ ಮೀಸಲಿರಿಸಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದೆ. ಆದರೆ, ಈ ಆಸ್ಪತ್ರೆ ಹಾಸಿಗೆ ನೀಡದೆ ವಂಚಿಸಿದೆ ಎನ್ನಲಾಗಿದೆ.

ಎ.14ರಂದು ಬಿಬಿಎಂಪಿ ಕೋಟಾ ಅಡಿಯಲ್ಲಿ ಕೊರೋನ ಸೋಂಕಿತರೊಬ್ಬರು ಆಸ್ಪತ್ರೆ ದಾಖಲಾಗಿ ಎ.20ರಂದು ಗುಣಮುಖರಾಗಿ ಬಿಡುಗಡೆ ಆಗಿದ್ದರು. ಆದರೆ ಎ.24ವರೆಗೂ ರೋಗಿ ಚಿಕಿತ್ಸೆ ಪಡೆಯುತ್ತಿರುವುದಾಗಿ ಸುಳ್ಳು ಮಾಹಿತಿಯನ್ನು ಆಸ್ಪತ್ರೆ ಆಡಳಿತ ಮಂಡಳಿ ತಿಳಿಸಿದೆ. ಅದೇ ರೀತಿ ಮತ್ತೋರ್ವ ಕೊರೋನ ಸೋಂಕಿತ ಎ.16ರಂದು ದಾಖಲಾಗಿದ್ದರು. ಎ.20ರಂದು ಸೋಂಕಿತ ವ್ಯಕ್ತಿ ಮೃತಪಟ್ಟಿದ್ದರು. ಈ ರೋಗಿಯ ಸಂಬಂಧಿಕರಿಂದ 2.49 ಲಕ್ಷ ರೂ. ಹಣವನ್ನು ಅಕ್ರಮವಾಗಿ ಕಟ್ಟಿಸಿಕೊಂಡಿದ್ದಾರೆ. ಜತೆಗೆ, ಬಿಬಿಎಂಪಿಗೆ 25 ರಂದು ದಾಖಲಾಗಿರುವುದಾಗಿ ಲೆಕ್ಕ ತೋರಿಸಿ ವಂಚಿಸಿದ್ದಾರೆ. ಇದೇ ರೀತಿ ಮೂವರಿಗೆ ಮೋಸ ಮಾಡಿ ಬೇರೆ ಕೋವಿಡ್ ಸೋಂಕಿತ ವ್ಯಕ್ತಿಗಳಿಗೆ ಹಾಸಿಗೆ ನೀಡದೆ ವಂಚಿಸಿದ್ದಾರೆ ಎಂದು ನಾಗೇಂದ್ರ ಕುಮಾರ್ ದೂರಿನಲ್ಲಿ ಆರೋಪ ಮಾಡಿದ್ದಾರೆ.

Source: Vartha Bharathi

You Might Also Like

" data-numposts="10" data-width="">